ಬಾಂಡ ದ್ವೀಪಗಳು -
	ಇಂಡೋನೇಷ್ಯ ದೇಶದ ದಕ್ಷಿಣ ಮಧ್ಯೆ ಮಲಕ್ಕಾ ದ್ವೀಪಗಳ ಗುಂಪಿಗೆ ಸೇರಿದ ಕಿರುದ್ವೀಪಗಳು.  ಸೇರಾಂದ್ವೀಪದ ಪೂರ್ವಭಾಗಕ್ಕೆ ದಕ್ಷಿಣದಲ್ಲಿ 106 ಕಿಮಿ. ದೂರದಲ್ಲಿದೆ.  ಈ ದ್ವೀಪಗಳ ಸಂಖ್ಯೆ ಹತ್ತು.  ಒಟ್ಟು ವಿಸ್ತೀರ್ಣ 186 ಚಮೀ.  ಜನಸಂಖ್ಯೆ 13,688 (1974).  ಈ ದ್ವೀಪಗಳ ಪೈಕಿ ದೊಡ್ಡವು ಬಾಂಡ ಬೇಸರ್ ಅಥವಾ ಮಹಾಬಾಂಡ, ಗುನಂಗ್ ಅಪಿ ಮತ್ತು ಬಾಂಡನೈರ್, ದ್ವೀಪಗಳೆಲ್ಲವೂ ಜ್ವಾಲಾಮುಖೀಯವಾದವು.  ಇವುಗಳ ನಡುವಣ ಕಡಲಿನ ಅಂಚುಗಳಲ್ಲಿ ಹಡಗುಗಳ ನಿಲುಗಡೆಗೆ ಉತ್ತಮ ಬಂದರುಗಳಿವೆ.  ದ್ವೀಪಗಳ ಸುತ್ತ ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲದಂಥ ಸುಂದರ ಸಾಗರಾಂತರ ವನವಿದೆ.  ಬಾಂಡ ಬೇಸರ್ ದ್ವೀಪದಲ್ಲಿ ಪ್ರವಾಳ ಶಿಲೆಯ ಗುಡ್ಡಗಳು 120 ಮೀ. ಎತ್ತರಕ್ಕಿವೆ.  ಗುನಂಗ್ ಅಪಿಯ ಅಗ್ನಿಪರ್ವತದ ಶಿಖರ ಸಮುದ್ರ ಮಟ್ಟಕ್ಕೆ 670 ಮೀ. ಎತ್ತರದಲ್ಲಿದೆ.  ಈ ಅಗ್ನಿಪರ್ವತದಿಂದ 1820 ಹಾಗೂ 1852ರಲ್ಲಿ ನಷ್ಟ ಸಂಭವಿಸಿತು. 

	ಬಾಂಡ ದ್ವೀಪಗಳ ಲಾವ ಹರಡಿರುವ ಭೂಮಿ ಜಾಕಾಯಿ ಮತ್ತು ಲವಂಗದ ಮರಗಳ ಬೆಳೆಗೆ ಅನುಕೂಲವಾಗಿದೆ.  ದ್ವೀಪಗಳ ಇತರ ಬೆಳೆಗಳು ತೆಂಗು ಮರ ಗೆಣಸು ಮತ್ತು ಉಷ್ಣವಲಯದ ಹಣ್ಣುಗಳು. ತೀರ ಕಡಲಲ್ಲಿ ನಾನಾ ಬಗೆಯ ಮೀನುಗಳು ಹೇರಳವಾಗಿದೆ. 

	ಬಾಂಡ ದ್ವೀಪವಾಸಿಗಳು ಜಾವ ಮತ್ತು ಸುತ್ತಮುತ್ತಲಿನ ದ್ವೀಪಗಳಿಂದ ಬಂದು ನೆಲಸಿದವರ ವಂಶಜರು.  ಹಿಂದೆ ಡಚ್ಚರು ತೋಟಗಳಲ್ಲಿ ಕೆಲಸ ಮಾಡಲು ತಂದ ಗುಲಾಮರೂ ಈ ಜನರೊಂದಿಗೆ ಸಂಮಿಶ್ರಗೊಂಡಿದ್ದಾರೆ.  ದ್ವೀಪಗಳ ಒಟ್ಟು ಜನರಲ್ಲಿ ಅರ್ಧ ಭಾಗದಷ್ಟು ಮಂದಿ ಬಾಂಡ ನೈರ ಪಟ್ಟಣದಲ್ಲಿ ವಾಸಿಸುತ್ತಾರೆ.  ಅದು ಈ ದ್ವೀಪಗಳ ಆಡಳಿತ ಕೇಂದ್ರ ಹಾಗೂ ಪ್ರಧಾನ ರೇವು.  ಬಾಂಡ ನೈರ ಮತ್ತು ಅಂಬಾನ್(ಅಂಬಾಯ್ನ) ದ್ವೀಪಗಳ ನಡುವೆ ಹಡಗು ಸಂಚಾರವಿದೆ. 

	1512ರಲ್ಲಿ ಪೋರ್ಚುಗೀಸರು ಬಾಂಡ ದ್ವೀಪಗಳನ್ನು ಕಂಡು ಅವನ್ನು ವಶಪಡಿಸಿಕೊಂಡರು. ಡಚ್ಚರು ಅವರನ್ನು ಓಡಿಸಿದರು (1621).  ಈ ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಇಂಗ್ಲೆಂಡ್ ಪ್ರಯತ್ನಿಸಿದಾಗ 1623ರಲ್ಲಿ ಅಂಬಾಯ್ನ ದ್ವೀಪ ವಾಸಿಗಳನೇಕರು ಕೊಲೆಗೆ ಒಳಗಾದರು. 1796ರಿಂದ 1800ರ ವರೆಗೆ ಈ ದ್ವೀಪಗಳು ಬ್ರಿಟಿಷರ ವಶದಲ್ಲಿದ್ದವು.  ನೆಪೋಲಿಯಾನಿಕ್ ಯುದ್ಧಗಳ ತರುವಾಯ ನಡೆದ ಪ್ಯಾರಿಸ್ ಕೌಲಿನ ಪ್ರಕಾರ ಇವನ್ನು ಡಚ್ಚರಿಗೆ ಹಿಂದಿರುಗಿಸಲಾಯಿತು (1814). ಎರಡನೆಯ ಮಹಾಯುದ್ಧದ ಕಾಲದಲ್ಲಿ (1939-45) ಜಪಾನೀಯರು ಈ ದ್ವೀಪಗಳನ್ನು ಆಕ್ರಮಿಸಿಕೊಂಡಿದ್ದರು.  ತರುವಾಯ ಇವು ಇಂಡೋನೇಷ್ಯ ಗಣರಾಜ್ಯಕ್ಕೆ ಸೇರಿದುವು. (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ